Hyd Kar Swamy Ramanand News

ಕನ್ನಡಮ್ಮನ ಕುವರನಿಗೆ ತಾಯ್ನಾಡಿನಲ್ಲಿಯೇ ಕಿಮ್ಮತ್ತಿಲ್ಲ

ಹೈದ್ರಾಬಾದ್ ಕರ್ನಾಟಕದ ಮೊದಲ ಮುಖವೇ ಸ್ವಾಮಿ ರಮಾನಂದ ತೀರ್ಥರು

special photoಬೀದರ: ಧೀರ ಸನ್ಯಾಸಿ, ಕ್ರಾಂತಿಯೋಗಿ ಸ್ವಾಮಿ ರಮಾನಂದ ತೀರ್ಥರು ದೇಶ ಕಂಡ ಅಪ್ರತಿಮ ಸ್ವಾತಂತ್ರ ಹೋರಾಟಗಾರರು. ವೃತ್ತಿಯಲ್ಲಿ ಧರ್ಮಗುರುವಾಗಿದ್ದರೂ ಪ್ರವೃತ್ತಿಯಲ್ಲಿ ಅವರೊಬ್ಬ ದೇಶಪ್ರೇಮಿ, ಕ್ರಾಂತಿ ಪುರುಷರಾಗಿದ್ದರು. ಸ್ವಾತಂತ್ರ ಹೋರಾಟ ಅದರಲ್ಲೂ ವಿಶೇಷವಾಗಿ ಹೈ.ಕ. ವಿಮೋಚನ ಚಳವಳಿಯ ನೇತಾರರಾಗಿ, ರೂವಾರಿಗಳಾಗಿ ಎದ್ದು ಕಾಣುವರು. ಮಹಾತ್ಮ ಗಾಂಧೀಜಿ, ಪಂ. ನೆಹರು ಮತ್ತು ಸರ್ದಾರ ಪಟೇಲರ

ಒಡನಾಡಿಯಾಗಿದ್ದ ಸ್ವಾಮಿ ರಾಮಾನಂದ ತೀರ್ಥರು ಸ್ವಾತಂತ್ರ ಹೋರಾಟದಲ್ಲಿ ಹೈ.ಕ. ಭಾಗದ ಮುಂಚೂಣಿ ನಾಯಕರಾಗಿದ್ದರು.
ಮೂಲತ: ಕನ್ನಡಿಗರಾದ ತೀರ್ಥರ ಜನ್ಮಭೂಮಿ ವಿಜಯಪುರ ಜಿಲ್ಲೆಯ ಸಿಂಧಗಿ. 1932 ರಲ್ಲಿ ಸನ್ಯಾಸ ದೀಕ್ಷೆ ಪಡೆದು ಸ್ವಾಮಿ ರಮಾನಂದ ತೀರ್ಥರು. 1935 ರಲ್ಲಿ ಅಧ್ಯಾಪಕ ವೃತ್ತಿ ತೊರೆದು ದೇಶ ಸೇವೆ ದೀಕ್ಷೆ ಪಡೆದು ಸ್ವಾತಂತ್ರ ಸಂಗ್ರಾಮದಲ್ಲಿ ದುಮುಕಿದರು. ಮಹಾತ್ಮ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿ ಆಂಗ್ಲರ ಮತ್ತು ಹೈದ್ರಾಬಾದ ನಿಜಾಮ ಸಂಸ್ಥಾನದ ವಿರುದ್ಧ ಸ್ವಾತಂತ್ರ ಚಳುವಳಿಗೆ ನಾಂದಿ ಹಾಡಿದರು. ಸ್ವಾತಂತ್ರ ಹೋರಾಟಗಾರರ ದೊಡ್ಡ ಪಡೆಯನ್ನು ಕಟ್ಟಿ ರಾಷ್ಟ್ರೀಯತೆ ಮತ್ತು ಸ್ವಾತಂತ್ರ ಚಳುವಳಿಯ ಜಾಗೃತಿ ಮೂಡಿಸಿದರು.  ನಿಜಾಮ ಆಡಳಿತ ವಿರುದ್ಧ ಹೋರಾಟ ನಡೆಸಿ ಹೈ.ಕ. ಭಾಗಕ್ಕೆ ಸ್ವಾತಂತ್ರ ತಂದು ಕೊಟ್ಟ ಧೀಮಂತ ನಾಯಕÀರು.

ಸ್ವಾಮಿ ರಮಾನಂದ ತೀರ್ಥರು ಮಹಾತ್ಮ ಗಾಂಧೀಜಿಯ ಕರೆಯ ಮೇರೆಗೆ 1942ರಲ್ಲಿ ಕ್ವಿಟ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದರು. ಹೈದ್ರಾಬಾದ ನಿಜಾಮ ಸಂಸ್ಥಾನದಲ್ಲಿ ರಾಷ್ಟ್ರೀಯ ಭಾವನೆ ಬಡಿದೆಬ್ಬಿಸಿ ಸ್ವಾತಂತ್ರ ಚಳುವಳಿಯ ಕಿಚ್ಚು ಹಚ್ಚಿದರು. ಹಾಗೆ ನೋಡಿದರೆ ರಾಷ್ಟ್ರೀಯ ಮುಂಚೂಣಿ ನಾಯಕರಿಂದ ನಿರ್ಲಕ್ಷಕ್ಕೊಳಗಾಗಿದ್ದ ಹೈದ್ರಾಬಾದ ನಿಜಾಮ ಸಂಸ್ಥಾನದಲ್ಲಿ ರಾಷ್ಟ್ರೀಯತೆ ಮತ್ತು ಸ್ವಾತಂತ್ರ ಆಂದೋಲನಕ್ಕೆ ನಾಂದಿ ಹಾಡಿದವರು ಸ್ವಾಮಿ ರಮಾನಂದ ತೀರ್ಥರು ಎಂಬುದು ಅಭಿಮಾನದ ಸಂಗತಿಯಾಗಿದೆ. 1946 ರಲ್ಲಿ ಸ್ವಾಮಿ ರಮಾನಂದ ತೀರ್ಥರು ಹೈದ್ರಾಬಾದ ಸ್ಟೇಟ್ ಕಾಂಗ್ರೇಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಸ್ವಾತಂತ್ರ ಚಳುವಳಿಗೆ ಈ ಭಾಗದಲ್ಲಿ ಮತ್ತಷ್ಟು ಬಲ ಬಂದಿತು. 1947 ರಲ್ಲಿ ಭಾರತದ ಒಕ್ಕೂಟದಲ್ಲಿ ಹೈದ್ರಾಬಾದ ಸಂಸ್ಥಾನ ವಿಲೀನವಾಗಲು ಒಪ್ಪಿಕೊಳ್ಳಲಿಲ್ಲ. ನಿಜಾಮ ಮಧ್ಯ ಪಾಕಿಸ್ಥಾನವೆನ್ನುವ ಸ್ವತಂತ್ರ ರಾಷ್ಟ್ರ ಕಟ್ಟುವ ಕನಸು ಕಂಡಿದ್ದ. ಇದನ್ನು ವಿರೋಧಿಸಿ ಸ್ವಾಮಿ ರಮಾನಂದ ತೀರ್ಥರು ನಿಜಾಮನ ವಿರುದ್ಧ ಭಾರತ ಸೇರಿ ಎಂಬ ಕರೆ ನೀಡಿದರು. ಇವರ ಕರೆಗೆ ಓಗೊಟ್ಟು 20 ಸಾವಿರ ದೇಶಭಕ್ತರು ಆಂದೋಲನದಲ್ಲಿ ಭಾಗವಹಿಸಿ ಜೈಲು ಸೇರಿದರು.

1947 ಆಗಸ್ಟ್ 14 ರಂದು ನಿಜಾಮ ಸ್ವಾತಂತ್ರ ಘೋಷಿಸಿಕೊಂಡು ಭಾರತ ಸ್ವಾತಂತ್ರ ವಿಜಯೋತ್ಸವ ಆಚರಿಸಲು ನಿರ್ಬಂಧ ಹೇರಿದನು. ಇದನ್ನು ದಿಕ್ಕರಿಸಿ ಸ್ವಾಮಿ ರಮಾನಂದ ತೀರ್ಥರು ಹೈದ್ರಾಬಾದಿನ ಕಿಂಗ ಕೋಟೆ ಪರಿಸರದಲ್ಲಿ ಸಾರ್ವತ್ರಿಕವಾಗಿ ತಿರಂಗಾ ಧ್ವಜ ಹಾರಿಸಿ ಬಂಧನಕ್ಕೊಳಗಾದರು. 1948 ಸೆಪ್ಟೆಂಬರ 18ರ ವರೆಗೂ ಅವರು ನಿಜಾಮ ಸರ್ಕಾರದ ವಿರುದ್ಧ ಜೈಲಿನಲ್ಲಿ ಇದ್ದುಕೊಂಡೆ ಹೋರಾಟ ನಡೆಸಿದರಲ್ಲದೇ ಸ್ವಾತಂತ್ರ ಸೇನಾನಿಗಳಿಗೆ ಸ್ಪೂರ್ತಿ ತುಂಬಿದರು.

ಅವರು ಜೈಲಿನಲ್ಲಿದ್ದು ಈ ಭಾಗದ ಜನಗಳಿಗೆ ಮತ್ತು ಹೋರಾಟಗಾರರಿಗೆ ‘ಸ್ನೇಹಿತರೇ ನಾವು ಮಾಡುವ ಯಾವ ತ್ಯಾಗವು ಈ ಹೋರಾಟದಲ್ಲಿ ಸಣ್ಣದೇ ಆಗಿ ಕಾಣುತ್ತದೆ. ನಾವು ಸೆರೆಮನೆಯಲ್ಲಿ ಸತ್ತರೂ ಸೈ. ಹೈದ್ರಾಬಾದ ಸಂಸ್ಥಾನದಲ್ಲಿ ಸ್ವಾತಂತ್ರ ಸೂರ್ಯ ಮೂಡುವ ದಿನಗಳು ದೂರಿಲ್ಲ. ನಮ್ಮದು ಅಸಾಮಾನ್ಯ ಹೋರಾಟ. ನಾನಂತು ಕೊನೆಯವರೆಗೆ ಹೋರಾಡುತ್ತೇನೆ. ನನ್ನನ್ನು ಗುಂಡಿಕ್ಕಿ ಕೊಂದರು ಸರಿ ಭಾರತದ ಧ್ವಜವನ್ನು ನಿಜಾಮರ ನೆಲದಲ್ಲಿ ಆಕಾಶದ ಎತ್ತರಕ್ಕೆ ಹಾರಿಸುವೆ’ ಎಂದು ಗುಡುಗಿದರು. ಸ್ವಾಮಿ ರಮಾನಂದ ತೀರ್ಥರು 1930 ರಿಂದಲೇ ಜಗತ್ತಿನ ಅತ್ಯಂತ ಶ್ರೀಮಂತ, ನಿರಂಕುಶ ಕ್ರೂರ ದೊರೆಯನಿಸಿದ ಹೈದ್ರಾಬಾದ ನಿಜಾಮನ ವಿರುದ್ಧ ಹೋರಾಡಿ ಅವನನ್ನು ಸಿಂಹಾಸನದಿಂದ ಕೆಳಕ್ಕಿಳಿಸಿದುದು ಸಣ್ಣ ಮಾತೇನಲ್ಲ. ಯಾವ ಆಸೆ ಆಮೀಷಕ್ಕೂ ಬಲಿ ಬೀಳದೇ ಹೈದ್ರಾಬಾದ ವಿಮೋಚನೆಗಾಗಿ ಹೋರಾಡಿದ ಪೂಜ್ಯ ಸ್ವಾಮಿ ರಾಮಾನಂದ ತೀರ್ಥರು ಹುಟ್ಟು ಕನ್ನಡಿಗರೆಂಬುದು ಇನ್ನೂ ಕರ್ನಾಟಕಕ್ಕೆ ತಿಳಿಯಬೇಕಾಗಿದೆ.

ಕನ್ನಡಿಗರಾದ ಅವರಿಗೆ ಕರ್ನಾಟಕ ತೋರಬೇಕಾದ ಗೌರವ ಇನ್ನೂ ತೋರದಿರುವದು ಅತ್ಯಂತ ನೋವಿನ ಸಂಗತಿ.
1952ರಲ್ಲಿ ಹೈದ್ರಾಬಾದ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ ಸ್ವಾಮಿ ರಮಾನಂದ ತೀರ್ಥರ ಹರ್ಷಕ್ಕೆ ಪಾರವೇ ಇರಲಿಲ್ಲ. ಅವರು ಚುನಾವಣೆಗೆ ನಿಲ್ಲಲಿಲ್ಲ. ರಾಜಕೀಯ ಅಧಿಕಾರ ಅಂತಸ್ತುಗಳಿಗೆ ಹಾತೋರೆಯಲಿಲ್ಲ. ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗಾಗಿ, ದೀನ, ದಲಿತ, ದುರ್ಬಲ, ಅಬಲೆಯರ, ರೈತರ, ಕಾರ್ಮಿಕರ, ಒಟ್ಟಾರೆ ಶೋಷಿತ ವರ್ಗದವರ ಧ್ವನಿಯಾಗಿ ಅವರ ವಿಕಾಸಕ್ಕಾಗಿ ಹೋರಾಡಿದರು. ಭೂದಾನ ಚಳುವಳಿಯಲ್ಲಿ ಸಕ್ರಿಯರಾದರು.

ರಾಷ್ಟ್ರೀಯ ಶಿಕ್ಷಣ ಕೊಡುವುದಕ್ಕಾಗಿ ನಾಂದೇಡ, ಅಂಬಾಜೋಗಯಿ ಮುಂತಾದವುಗಳಲ್ಲಿ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿದರು. 1953ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಷಾವಾರು ಪ್ರಾಂತ ರಚನೆಯ ನಿರ್ಣಯ ಕೈಗೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದರು. ತನ್ಮೂಲಕ ಹೈದ್ರಾಬಾದ ಸಂಸ್ಥಾನದಲ್ಲಿದ್ದ 13 ಜಿಲ್ಲೆಗಳನ್ನು ಕರ್ನಾಟಕ, ಆಂದ್ರ, ಮಹಾರಾಷ್ಟ್ರಗಳಿಗೆ ವಿಲೀನಗೊಳ್ಳುವಂತೆ ಮಾಡಿದರು. ಅಧ್ಯಾತ್ಮಿಕ ಮೌಲ್ಯಗಳ ಪ್ರತಿಪಾದನೆಗಾಗಿ ವಿಜನ್ ಎನ್ನುವ ಪತ್ರಿಕೆಯನ್ನು ನಡೆಸಿದರು. ಈ ಭಾಗದ ಜನದ ಕೋರಿಕೆಗೆ ಮನ್ನಣೆ ಇಟ್ಟು ಅವರು ಎರಡು ಬಾರಿ ಅಂದರೆ ಕಲಬುರಗಿ ಹಾಗೂ ಮರಾಠವಾಡ ಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಯಾಗಿ ಜನಸೇವೆ ಮಾಡಿದರು. ಈ ಮಹಾನ ಚೇತನ ಅನಾರೋಗ್ಯದಿಂದ 22 ಜನೆವರಿ 1979 ರಂದು ಇಹಲೋಕ ತ್ಯಜಿಸಿದರು. ಸ್ವಾಮಿ ರಮಾನಂದ ತೀರ್ಥರು ರಾಷ್ಟ್ರ ಪ್ರೇಮಿಗಳಾಗಿ ಹೈದ್ರಾಬಾದ ಸಂಸ್ಥಾನದ ವಿಮೋಚನೆಯ ಶಿಲ್ಪಿಗಳಾಗಿ ಅಜರಾಮರರಾಗಿದ್ದಾರೆ. ಸ್ವಾತಂತ್ರ ಯೋಧರಲ್ಲಿ ಅವರೊಬ್ಬ ಮಹಾನ ಸಂತರಾಗಿದ್ದರು. ಒಂದು ದೃಷ್ಟಿಯಿಂದ ಸ್ವಾಮಿ ರಮಾನಂದ ಚರಿತ್ರೆ ಬೇರೆಯಲ್ಲ,  ಹೈ.ಕ. ವಿಮೋಚನಾ ಚಳುವಳಿ ಬೇರೆಯಲ್ಲ. ಅವೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.

ಇವರ ಮಹಾನ ಸಾಧನೆಯನ್ನು ಅನುಲಕ್ಷಿಸಿ ಮಹಾರಾಷ್ಟ್ರ ಸರ್ಕಾರ ನಾಂದೇಡದ ವಿಶ್ವವಿದ್ಯಾಲಯಕ್ಕೆ ಸ್ವಾಮಿ ರಮಾನಂದ ತೀರ್ಥರ ಹೆಸರನ್ನಿಟ್ಟು ಗೌರವಿಸಿದೆ. ಆದರೆ ಕನ್ನಡಿಗರಾದ ಸ್ವಾಮಿ ರಮಾನಂದ ತೀರ್ಥರು ಕರ್ನಾಟಕ ಸರ್ಕಾರಕ್ಕೆ ಕಾಣದಿರುವುದು ದುರ್ದೈವದ ಸಂಗತಿ. ಇನ್ನೂ ಕಾಲ ಮಿಂಚಿಲ್ಲ. ಈಗಾಲಾದರೂ ಇಂತಹ ಮಹಾನ ಪುರುಷನ ಆದರ್ಶ ಬದಕನ್ನು ದೇಶವಾಸಿಗಳಿಗೆ ಅದರಲ್ಲೂ ನಾಡಿನ ಜನತೆಗೆ ತಿಳಿಯಪಡಿಸುವುದು ರಾಜ್ಯ ಸರ್ಕಾರದ ಮುಖ್ಯ ಕರ್ತವ್ಯವಾಗಿದೆ.

ಆದ್ದರಿಂದ ಕರ್ನಾಟಕ ಘನ ಸರ್ಕಾರ ಹೈದ್ರಾಬಾದ ಕರ್ನಾಟಕ ಸ್ವಾತಂತ್ರ ಶಿಲ್ಪಿ ಸ್ವಾಮಿ ರಮಾನಂದ ತೀರ್ಥರ ಮಹಾನ ಚರಿತ್ರೆಯನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಬೇಕಲ್ಲದೆ ಅವರ ಸ್ಮರಣಾರ್ಥ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಮತ್ತು ಹೈದ್ರಾಬಾದ ಕರ್ನಾಟಕ ಪ್ರದೇಶದ ಪ್ರತಿಯೊಂದು ತಾಲ್ಲೂಕ, ಜಿಲ್ಲಾ ಕೇಂದ್ರಗಳಲ್ಲಿ ಹೈ.ಕ. ಸ್ವಾತಂತ್ರ ಉದ್ಯಾನವನಗಳನ್ನು ನಿರ್ಮಿಸಿ ಅದರಲ್ಲಿ ಅವರ ಭವ್ಯ ಕಂಚಿನ ಮೂರ್ತಿಯನ್ನು ಸ್ಥಾಪಿಸುವ ಮೂಲಕ ರಾಜ್ಯ ಸರ್ಕಾರ ಅವರಿಗೆ ಗೌರವ ನೀಡಬೇಕೆಂಬುವುದು ಹೈದ್ರಾಬಾದ ಕರ್ನಾಟಕ ಭಾಗದ ಬಹುಜನರ ಸಾತ್ವಿಕ ಬೇಡಿಕೆಯಾಗಿದೆ. ಇದರಿಂದ ಭಾವಿ ಜನಾಂಗಕ್ಕೆ ಹೈ.ಕ. ವಿಮೋಚನಾ ಚಳುವಳಿಯ ಮಹತ್ವ ಏನೆಂಬುವುದು ತಿಳಿದು ಬರುವುದು. ಮಾನ್ಯ ಮುಖ್ಯ ಮಂತ್ರಿಗಳು ಹೈ.ಕ. ವಿಮೋಚನಾ ದಿನಾಚರಣೆಯ ಸುಸಂದರ್ಭದಲ್ಲಿ ಈ ಐತಿಹಾಸಿಕ ಮಹಾನ್ ಕಾರ್ಯ ಘೋಷಣೆ ಮಾಡುವರೆಂಬುದು ಈ ಭಾಗದ ಪ್ರತಿಯೊರ್ವ ದೇಶಭಕ್ತನ ಮನದಾಸೆಯಾಗಿದೆ.

 

Sanjevani News :

Leave a Reply

Your email address will not be published. Required fields are marked *