Daily Archives: June 25, 2014

10 ಕೋಟಿ ಕ್ರಿಯಾಯೋಜನೆಗೆ ಅಸ್ತು

ಪ್ರಸಕ್ತ ಸಾಲಿನ ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 10.85 ಕೋಟಿ ಕ್ರಿಯಾ ಯೋಜನೆಗೆ ಜಿಪಂ ಜಿಲ್ಲಾ ಯೋಜನಾ ಸಮಿತಿ ಸಭೆ ಅನುಮೋದನೆ ನೀಡಿದೆ.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷರಾದ ಜಿಪಂ ಹಂಗಾಮಿ ಅಧ್ಯಕ್ಷೆ ಜಗದೇವಿ ಝರಣಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.ಪ್ರಸಕ್ತ ಸಾಲಿನ ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಈ ಬಾರಿ ಒದಗಿಸಲಾಗಿರುವ 10.85 ಕೋಟಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ 217 ಲಕ್ಷ, ಗ್ರಾಮ ಪಂಚಾಯಿತಿಗಳಿಗೆ 607.60 ಲಕ್ಷ, ತಾಪಂಗಳಿಗೆ 173.60 ಲಕ್ಷ ಹಾಗೂ ಜಿಪಂಗೆ 86.8 ಲಕ್ಷ ಹಂಚಿಕೆ ಮಾಡಲಾಗಿದೆ.
ದುರಸ್ತಿ ಕಾಮಗಾರಿಗಳಿಗೆ ಅವಕಾಶವಿಲ್ಲ: ಡಾ. ನಂಜುಂಡಪ್ಪ ವರದಿ ಆಧಾರದ ಮೇರೆಗೆ ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿಯ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ನಿಗದಿಪಡಿಸಲಾಗಿರುವ ಮಾರ್ಗಸೂಚಿಗಳ ಅನ್ವಯ ಯೋಜನೆಗಳ ಅನುಷ್ಠಾನ ಮಾಡಬೇಕಿದ್ದು, ಪ್ರಸಕ್ತ ಸಾಲಿನಲ್ಲಿ ಮೂಲ ಸೌಕರ್ಯಗಳನ್ನು ವೃದ್ಧಿಪಡಿಸುವ ಹಾಗೂ ದೀರ್ಘ ಕಾಲಾವಧಿಯ ಯೋಜನೆಗಳಿಗೆ ಶೇ.90ರಷ್ಟು ಅನುದಾನ ಬಳಸಬೇಕು ಮತ್ತು ಉಳಿದ ಶೇ. 10ರಷ್ಟನ್ನು ಇತರೆ ಯೋಜನೆಗಳಿಗೆ ಮಾತ್ರ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ದುರಸ್ತಿ ಕಾಮಗಾರಿಗಳಿಗೆ ಈ ಅನುದಾನವನ್ನು ಬಳಸಿಕೊಳ್ಳಲು ಅವಕಾಶವಿರುವುದಿಲ್ಲ ಎಂದು ಜಿಪಂ ಸಿಇಒ ಉಜ್ವಲಕುಮಾರ್ ಘೋಷ್ ತಿಳಿಸಿದರು.
ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಕಳೆದ ಸಾಲಿನಲ್ಲಿ ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿಯಡಿ ಕೈಗೊಂಡ ಕಾಮಗಾರಿಗಳ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ಅವಲೋಕನ ನಡೆಸಿದರು. ಜಿಲ್ಲಾ ಯೋಜನಾ ಸಮಿತಿ ಸಭೆಯ ಉಪಾಧ್ಯಕ್ಷೆ ಹಾಗೂ ನಗರಸಭೆ ಅಧ್ಯಕ್ಷೆ ಫಾತೀಮಾ ಅನ್ವರ್ ಅಲಿ ಇದ್ದರು.
ಯೋಜನಾ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಶೈಲೇಂದ್ರ ಬೆಲ್ದಾಳೆ, ಕುಶಾಲ್ರಾವ್ ಪಾಟೀಲ್, ಲತಾ ಹಾರಕೂಡೆ, ನೀಲಮ್ಮ, ಪ್ರಜಾದೇವಿ ಸಿದ್ರಾಮ, ಜಿಪಂ ಮುಖ್ಯ ಯೋಜನಾಧಿಕಾರಿ ಕಿಶೋರ್ ಕುಮಾರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ತಾಪಂವಾರು
ಅಭಿವೃದ್ಧಿ ನಿಧಿ ವಿವರ
ಔರಾದ್     39.84 ಲಕ್ಷ
ಬಸವಕಲ್ಯಾಣ     37.51ಲಕ್ಷ
ಭಾಲ್ಕಿ     34.93 ಲಕ್ಷ
ಬೀದರ್     25.89 ಲಕ್ಷ
ಹುಮನಾಬಾದ್     35.43 ಲಕ್ಷ
ನಗರ ಸ್ಥಳೀಯ ಸಂಸ್ಥೆ
ಬೀದರ್     98.21 ಲಕ್ಷ
ಬಸವಕಲ್ಯಾಣ     35.32 ಲಕ್ಷ
ಭಾಲ್ಕಿ     27.25 ಲಕ್ಷ
ಹುಮನಾಬಾದ್     25.59 ಲಕ್ಷ
ಚಿಟಗುಪ್ಪಾ     15.70 ಲಕ್ಷ
ಔರಾದ್     14.92 ಲಕ್ಷ