Daily Archives: June 6, 2014

Stop Using Environment Pollutant Plastic Material

ಬೀದರ್: ಪರಿಸರ ವಿನಾಶಕ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೊಬ್ಬರೂ ನಿಲ್ಲಿಸಿ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂಜೀವಕುಮಾರ ಹಂಚಾಟೆ ಕರೆ ನೀಡಿದರು.ಪರಿಸರ ದಿನಾಚರಣೆ ಅಂಗವಾಗಿ ಗುರುವಾರ, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪರಿಸರ ಮಾನವನಿಗೆ ಮಾತ್ರವಲ್ಲ ಸಕಲ ಜೀವ ರಾಶಿಗಳಿಗೂ ಆಶ್ರಯ ತಾಣ. ಪರಿಸರದಲ್ಲಿ ಏರುಪೇರಾದಲ್ಲಿ ಎಲ್ಲ ಜೀವಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ ಅವರು, ಪರಿಸ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಪರಿಸರ ಜಾಗೃತಿ ನಡೆಯಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರು ಸಕ್ರೀಯವಾಗಿ ‘ಹಸಿರೇ ನಮ್ಮ ಉಸಿರು’ ಎಂಬುದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಬೇಕೆಂದರು.ಮುಂದಿನ ಪೀಳಿಗೆಗೆ ನಿರ್ಮಲ ಪರಿಸರ ಉಳಿಸಿ: ರಾಜ್ಯದ ಪ್ರತಿಯೊಬ್ಬ ವ್ಯಕ್ತಿ ಒಂದು ಸಸಿ ನೆಟ್ಟು ಪೋಷಿಸಿದ್ದೇಯಾದಲ್ಲಿ ಪರಿಸರ ಸೌಂದರ್ಯ ಯಾವ ರೀತಿ ಇರುತ್ತದೆ ಎಂಬುದನ್ನು ಒಂದೊಮ್ಮೆ ನೆನಪಿಸಿಕೊಳ್ಳಿ. ನಿಸರ್ಗದ ಸಕಲ ಸುಖಗಳನ್ನು ಅನುಭವಿಸುವ ನಾವುಗಳು ವಾಯು, ಜಲ ಮತ್ತು ನೆಲವನ್ನು ಮಲೀನಗೊಳಿಸದೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ನಿರ್ಮಲವಾದ ಪರಿಸರವನ್ನು ಕಲ್ಪಿಸಿಕೊಡುವತ್ತ ಜವಾಬ್ದಾರಿ ಹೊರಬೇಕೆಂದು ನ್ಯಾ. ಹಂಚಾಟೆ ತಿಳಿಸಿದರು.ಜಿಲ್ಲಾ ನ್ಯಾಯಾಲಯದ ಆವರಣದ ಹಲವೆಡೆ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಸಂಜೀವಕುಮಾರ ಹಂಚಾಟೆ, ಜಿಲ್ಲಾ ಉಪ ಅರಣ್ಯ  ಸಂರಕ್ಷಣಾಧಿಕಾರಿಗಳಾದ ಡಾ. ಸುನೀಲಕುಮಾರ ಪನ್ವಾರ್ ಚಾಲನೆ ನೀಡಿದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಆರ್. ರಾಜಾಸೋಮಶೇಖರ್, ವಕೀಲರ ಸಂಘದ ಅಧ್ಯಕ್ಷ ಕೆ.ಕಾಶಿನಾಥ, ಹಿರಿಯ ವಕೀಲರಾದ ಬಿ.ಎಸ್. ಪಾಟೀಲ್, ವಿಜಯ ರೆಡ್ಡಿ, ಕೆ.ಎಚ್. ಪಾಟೀಲ್ ಉಪಸ್ಥಿತರಿದ್ದರು.

Every Village should have Medicinal Forest : Sherikar

medicinalplant1Bidar : ಪ್ರತಿ ಗ್ರಾಮದಲ್ಲಿ ಕಡ್ಡಾಯವಾಗಿ ಔಷಧಿ ವನ ನಿರ್ಮಿಸುವಂತೆ ಖ್ಯಾತ ಆರ್ಯುವೇದ ವೈದ್ಯ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಸವಣ್ಣಪ್ಪ ಶೇರಿಕಾರ ಕರೆ ನೀಡಿದರು.ತಾಲೂಕಿನ ನಿಡವಂಚಾ ಗ್ರಾಮದಲ್ಲಿ ಪರಿಸರ ವಾಹಿನಿ ಹಾಗೂ ಚಾಲುಕ್ಯ ಶಿಕ್ಷಣ ಸಂಸ್ಥೆ ಮರಕುಂದಾ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಾಚರಣೆ ಹಾಗೂ ಪರಿಸರ ಸಂರಕ್ಷಣೆಗಾಗಿ ನಿಡವಂಚಾ ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಸಸಿ ವಿತರಿಸುವ ಮೂಲಕ ಚಾಲನೆ ನೀಡಿದರು. ಆರೋಗ್ಯ ಕಾಪಾಡುವಲ್ಲಿ ಆರ್ಯುವೇದಿಕ ಔಷಧಿ ಗಿಡಗಳು ತುಂಬಾ ಮಹತ್ವದ ಪಾತ್ರ ವಹಿಸುತ್ತವೆ. ಹಿರಿಯರು ಗ್ರಾಮದ ಪರಿಸರ ಸಂರಕ್ಷಣೆಗಾಗಿ ಕಡ್ಡಾಯವಾಗಿ ‘ಔಷಧಿ ವನ’ ನಿರ್ಮಿಸುತ್ತಿದ್ದರು. ಆದರೆ ಇಂದು ಅದು ಕಾಣದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾಡುಗಳ ನಾಶದಿಂದ ಪರಿಸರ ಅಸಮತೋಲನವಾಗಿ ವಾಯುಗುಣದಲ್ಲಿ ಬದಲಾವಣೆಯೊಂದಿಗೆ ಪರಿಸರದಲ್ಲಿ ಏರುಪೇರು ಆಗುತ್ತಿದೆ ಎಂದರು. ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿ ಮಾತನಾಡಿ, ಪರಿಸರ ಅಸಮತೋಲನದಿಂದಾಗಿ ಭೂತಾಪಮಾನ ಹೆಚ್ಚಳವಾಗಿ ಅನೇಕ ಪಕೃತಿ ವಿಕೋಪಗಳು ಸಂಭವಿಸುತ್ತಿದೆ ಎಂದರು. ಪರಿಸರ ಸಂರಕ್ಷಣೆಗಾಗಿ ವರ್ಷವಿಡೀ ಜಿಲ್ಲೆಯಾದ್ಯಂತ ತಿಂಗಳಲ್ಲಿ ಪ್ರತಿ ಎರಡು ವಾರ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಮಗುವಿಗೊಂದು ಮರ, ಶಾಲೆಗೊಂದು ವನ ಯೋಜನೆಯಡಿಯಲ್ಲಿ ಸಸಿ ನೆಡಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಡಾ. ನಾಗರಾಜ, ಕೃಷ್ಣಾ ಪಾಂಚಾಳ ಇದ್ದರು. ವೀರಣ್ಣ ಮಡಿವಾಳ ಸ್ವಾಗತಿಸಿ ವಂದಿಸಿದರು.